ಲಾಕ್ ಡೌನ್ ನಲ್ಲಿ ಏನೆಲ್ಲಾ ಮಾಡಬಹುದು👍😊


ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಏನೇನೆಲ್ಲಾ ಮಾಡಬಹುದು

ಲಾಕ್ ಡೌನ್ ಆಗಿದೆಯೆಂದು ಎಲ್ಲರೂ ಬೇಸರ ಮಾಡಿಕೊಂಡಿರಬಹುದು, ನಿಜ ಖಂಡಿತವಾಗಿಯೂ ಬೇಸರವಾಗುತ್ತೆ. ಲಾಕ್ ಡೌನ್ ಮುಗಿಯುವವರೆಗೂ ಕೆಲಸ ಇಲ್ಲ ದುಡಿಮೆ ಇಲ್ಲ ಜೀವನ ಸಾಗಿಸುವುದು ಕಷ್ಟಕರವೆ ನಿಜ. ನಾವು ಅದರ ಹೊರತಾಗಿ ಬೇರೊಂದು ರೀತಿಯಲ್ಲಿ ಯೋಚನೆ ಮಾಡಿ ಈ ಬೇಸರವನ್ನು ಕಳೆದುಕೊಳ್ಳಬಹುದು. ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ನಾವು ಸಂತಸದಿಂದ ಹೇಗಿರಬಹುದು ಎಂಬುದನ್ನು ಯೋಚನೆ ಮಾಡುವಂತಹ ಸಂದರ್ಭ ನಮ್ಮಮುಂದಿದೆ. 

ಲಾಕ್ ಡೌನ್ ಆಯ್ತು ಇನ್ನೇನು ಕೆಲಸವಿಲ್ಲ ಎನ್ನುವವರು , ಬೇರೆ ಊರಿನ ಕಂಪೆನಿಗಳಲ್ಲಿ ಉದ್ಯೋಗವಂಚಿತರಾಗಿ ಬಂದಂತವರು ತಮ್ಮ ಕೈಯಲ್ಲಿರುವ ಹೊಲ,ಗದ್ದೆಗಳನ್ನು ಉಳುಮೆ ಮಾಡಿ ಊಟಕ್ಕೆ ಜೋಳ,ರಾಗಿ, ಗೋಧಿ,ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಬೆಳೆದು ನಮ್ಮ ಆರೋಗ್ಯಕ್ಕೆ ಯಾವ ಅಪಾಯ ಆಗದಂತೆ ಇರಬಹುದು. ತಮ್ಮ ಮನೆಯಲ್ಲಿ ಹೊಲಗದ್ದೆ ಇತರೆ ಕೆಲಸಗಳಲ್ಲಿ ನಿರತರಾಗಿರುವವರಿಗೆ ಸಹಾಯ ಮಾಡಿದರೆ ಅವರಿಗೂ ಸಂತಸದ ಜೊತೆಗೆ ಆತ್ಮಶಕ್ತಿ ಹೆಚ್ಚುವುದು. 

ಇನ್ನು ಉದ್ಯೋಗ ಹರಸಿ ಕೂತಿರುವ ಯುವಕ, ಯುವತಿಯರು ಇದೇ ಸಮಯವನ್ನು ಸದುಪಯೋಗಪಡಿಸಿಕೊಳ್ಳಬಹುದು. ಇಷ್ಟು ದಿನ ನನಗೆ ಓದಲು ಸಮಯವಿಲ್ಲ , ಬಿಡುವೇ ಸಿಗುತ್ತಿಲ್ಲ ಎಂದು ಖಾಲಿಪೀಲಿ ತಿರುಗಿ ಸಮಯವನ್ನು ವ್ಯರ್ಥ ಮಾಡಿದ್ದಾಯ್ತು. ಇನ್ನೇನು ಲಾಕ್ ಡೌನ್ ಆಗಿದೆ ಎಲ್ಲೂ ಸುತ್ತುವ ಪ್ರಮೇಯವೇ ಇಲ್ಲ, ಸಮಯವಂತೂ ಸಾಕಷ್ಟಿದೆ , ಓದಲು ಒಂದು ಸುವರ್ಣಾವಕಾಶ. ಮನೆಯ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಆರಾಮಾಗಿ ಓದಕೊಳ್ಳಬಹುದು. ತಂದೆ ತಾಯಿ ಅಣ್ಣ ಅಕ್ಕ ತಮ್ಮ ತಂಗಿ ಮಕ್ಕಳು ಹೀಗೆ ಕುಟುಂಬ ಸದಸ್ಯರೊಂದಿಗೆ ಬೆರೆತು ಸಂತಸದಿಂದ ಲಾಕ್ ಡೌನ್ ಸಮಯವನ್ನು ಕಳೆಯಬಹುದು. 
ಇನ್ನು ಚಿತ್ರಕಲೆ, ಕರಕುಶಲತೆ, ನೇಯ್ಗೆ, ಎಣಿಕೆಯಂತಹ ಆಸಕ್ತಿದಾಯಕ ಹವ್ಯಾಸಗಳನ್ನು ಹೊಂದಿದವರು ಸಂಸಾರದ ಜಂಜಾಟದಲ್ಲಿ ಎಲ್ಲವನ್ನೂ ಮರೆತಿರುತ್ತಾರೆ. ಇವರೆಲ್ಲರೂ ಮತ್ತೆ ತಮ್ಮ ಆಸಕ್ತಿಯಂತೆ ಅವುಗಳನ್ನು ಮಾಡಿ ಮನಸ್ಸಿಗೆ ಆನಂದವನ್ನು ತಂದುಕೊಳ್ಳಬಹುದು. ಜೊತೆಗೆ ಕಸದಿಂದ ರಸ ಎನ್ನುವಹಾಗೆ ಉಪಯೋಗಕ್ಕೆ ಬಾರದ ವಸ್ತುಗಳಿಂದ ಕೆಲವು ಉಪಯುಕ್ತ ವಸ್ತುಗಳನ್ನು ತಯಾರಿಸಿ ಮನೆಯಲ್ಲಿ ಬಳಸಬಹುದು. 

ವಯಸ್ಸಾದ ಅಜ್ಜ ಅಜ್ಜಿ, ತಂದೆ ತಾಯಿ ಇವರೊಂದಿಗೆ ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿರಿಸಬಹುದು. ಇದರಿಂದ ಅವರ ಮನಸ್ಸಿಗೂ ಆನಂದ ಉಂಟಾಗುತ್ತದೆ . ಎಂದೋ ಬಿರುಕುಬಿಟ್ಟ ಸಂಬಂಧಗಳು ಮತ್ತೆ ಬೆಸೆದುಕೊಳ್ಳುತ್ತವೆ. ಇದರೊಂದಿಗೆ ನಮ್ಮ ಜಾನಪದ ಕಲೆಗಳನ್ನು ನಾವಿಲ್ಲಿ ಸೇರಿಸಿಕೊಳ್ಳಬಹುದು. ಜಾನಪದ ಗೀತೆಗಳನ್ನು, ದೇವರ ಕೀರ್ತನೆಗಳನ್ನು ,ವಚನಗಳನ್ನು ಇನ್ನಿತರೆ ವಿಷಯಗಳ ಕುರಿತು ಆಳವಾದ ಜ್ಞಾನವನ್ನು ಪಡೆಯಬಹುದು. ಹಲವರಿಗೆ ಪುಸ್ತಕ ಓದುವ ಹವ್ಯಾಸವಿದ್ದು ಕೆಲಸದ ಒತ್ತಡದಿಂದ ಅದೆಲ್ಲಾ ಮಾಯವಾಗಿರುತ್ತದೆ, ಕವಿತೆ,ಕಥೆ ಬರೆಯುವ ಹವ್ಯಾಸವೂ ಹೀಗೆ ಆಗಿದ್ದರೆ ಈ ಲಾಕ್ ಡೌನ್ ಸಮಯ ಅದಕ್ಕೆಲ್ಲಾ ಪುಷ್ಠಿಯನ್ನು ನೀಡುತ್ತದೆ. 

ಇನ್ನು ಚಿಕ್ಕ ಮಕ್ಕಳ ಆಟ ಮನೆಯ ಎಲ್ಲಾ ಮಂದಿಗೂ ಇಷ್ಟವಾಗದೇ ಇರದು. ಎಲ್ಲರೂ ಕೂಡಿ ಬಾಳಿದರೆ ಇಂತಹ ಸಂತಸವನ್ನು ಅನುಭವಿಸುವ ಎರಡು ಮಾತಿಲ್ಲ. ಈ ಸಮಯದಲ್ಲಿ ಮನೆಯವರೆಲ್ಲರೂ ಕೂಡಿ ತಮ್ಮ ಹೊಲಗಳಿಗೆ ತೆರಳಿ, ಹಚ್ಚಹಸಿರಿನ ನಡುವೆ ಕಣ್ಣಾಮುಚ್ಚಾಲೆಯಂತಹ ಆಟಗಳನ್ನು ಆಡಿ ಮೈಮನಗಳಿಗೆ ಹಿಡಿದ ಜಡ್ಡನ್ನು ಹೋಗಲಾಡಿಸಬಹುದು. ಮನೆಯಲ್ಲಿರುವವರು ಚಿಕ್ಕ ಮಕ್ಕಳಿಗೆ  ನೀತಿಪಾಠಗಳನ್ನು ಹೇಳುವುದರೊಂದಿಗೆ, ಶಾಲಾ ಪುಸ್ತಕಗಳಲ್ಲಿನ ಪಾಠಗಳನ್ನೂ ಹೇಳಿಕೊಡಬಹುದು. ಎಲ್ಲರೊಂದಿಗೂ ಕೂತು ತಿನ್ನುವ ಸುಖವನ್ನಂತೂ ಯಾರಿಗೂ ಹೇಳತೀರದು. ಊರಲ್ಲಿಯೇ ಸಣ್ಣಪುಟ್ಟ ಹಬ್ಬಗಳನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅದ್ಧೂರಿಯಾಗಿ ಆಚರಣೆ ಮಾಡಬಹುದು. 
ಎಲ್ಲರೂ ಮರಗಿಡಗಳನ್ನು ಕಡಿದು ಸಿಮೆಂಟಿನ ಮನೆಗಳನ್ನು ಕಟ್ಟುತ್ತಿದ್ದೇವೆ..ಈಗಾಗಲೇ ಪರಿಸರವು ವಿಕೋಪಗೊಂಡು ಇಂತಹ ಕ್ರೂರವಾದ ರೋಗರುಜಿನಗಳನ್ನು ತಂದೊದಗಿಸುತ್ತಿದೆ. ಇನ್ನಾದರೂ ಅರಿತು ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಭೂಮಿತಾಯಿಯ ಮೇಲಿನ ಋಣವನ್ನು ಕಿಂಚಿತ್ತಾದರೂ ತೀರಿಸೋಣ. ಲಾಕ್ ಡೌನ್ ಸಂದರ್ಭದಲ್ಲಿ ಪ್ರಾಣಿ ,ಪಕ್ಷಿಗಳಿಗೆ ಆಹಾರ ,ನೀರು ಒದಗಿಸುವ ಹವ್ಯಾಸವನ್ನು ಬೆಳೆಸಿಕೊಳ್ಳೋಣ. ಯಾರೊಂದಿಗೂ ಜಗಳವಾಡದೇ ಉತ್ತಮ ಸಂಬಂಧ ಕಾಯ್ತುಕೊಳ್ಳೋಣ. ಸತ್ತಾಗ ಯಾವ ಹಣ ಆಸ್ತಿ ನಮ್ಮಿಂದೆ ಬರುವುದಿಲ್ಲ, ಬರುವುದಾದರೆ ನಾವು ಗಳಿಸಿದ ಪ್ರೀತಿ,ಸ್ನೇಹಗಳು ಮಾತ್ರ .
ಈ ರೀತಿಯಾಗಿ ಹಳೆಯ ಪದ್ಧತಿಗಳನ್ನು ಅಲ್ಲಗಳೆಯದೇ ಹಿರಿಯರ ಮಾರ್ಗದರ್ಶನದೊಂದಿಗೆ ಬದುಕನ್ನು ನಡೆಸಿದರೆ ಆರೋಗ್ಯವಾದ , ಸಂತಸದಿಂದ ಕೂಡಿದ , ಕರುಣೆ ,ವಾತ್ಸಲ್ಯ ,ಪ್ರೀತಿ ,ಸಂಬಂಧಗಳಿಂದ ಕೂಡಿದ ಜೀವನವನ್ನು ಸಾಗಿಸಬಹುದು. 

*ಸರ್ಪಭೂಷಣ....✍🏻*

Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰